ಪ್ರಾಯೋಗಿಕ ಕಾರ್ಯ

ತರಗತಿಯಲ್ಲಿ ಬೋಧಿಸಿದ ಗ್ರಂಥದಿಂದ ಓದಿ ತಿಳಿದುಕೊಂಡ ಅಥವಾ ಇತರರಿಂದ ಕೇಳಿ ಅರಿತುಕೊಂಡ ತತ್ತ್ವಾಧಾರದ ಜ್ಞಾನವನ್ನು ಪ್ರಯೋಗಗಳಿಂದ ಸ್ಪಷ್ಟಪಡಿಸಿಕೊಳ್ಳಲು ಶಾಲಾ ಕಾಲೇಜುಗಳಲ್ಲಿ ಅಥವಾ ಕಾರ್ಖಾನೆ ಕಾರ್ಯಾಲಯಗಳಲ್ಲಿ ಏರ್ಪಡಿಸುವ ಅಭ್ಯಾಸಕಾರ್ಯಕ್ರಮ (ಪ್ರಾಕ್ಟಿಕಲ್‍ವರ್ಕ್). ಕೌಶಲಪ್ರದ ಅಥವಾ ಕಾರ್ಯಪ್ರದ ಕಲಿವಿನಲ್ಲಿ ಇದು ಅತ್ಯಗತ್ಯ. ಚರ್ಚಾಗೋಷ್ಠಿ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವಾಗ ಕೇವಲ ಮಾನಸಿಕವಾಗಿ ಸಂಬಂಧಿಸಿದ ಸೈದ್ಧಾಂತಿಕ ಜ್ಞಾನ ದೃಢಗೊಳ್ಳುತ್ತದೆ. ಅಷ್ಟೆ. ಅದೇ ಜ್ಞಾನವನ್ನು ನೋಡಿ ಪ್ರಯೋಗ ಮಾಡಿ ತಿಳಿದಲ್ಲಿ ಅದರ ಬಗೆಗಿನ ದೃಢತೆ ಇನ್ನಷ್ಟು ಹೆಚ್ಚುತ್ತದೆ. ಪ್ರಾಯೋಗಿಕ ಕಾರ್ಯ ಇಂದಿನ ಎಲ್ಲ ವಿದ್ಯೆಯ ಅವಿಭಾಜ್ಯ ಅಂಗವಾಗಿದೆ.

	ಪ್ರಾಥಮಿಕ ಪೂರ್ವದ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಚಟುವಟಿಕೆಗಳೆಲ್ಲ ಅಭ್ಯಾಸಾರ್ಥ ಕಲಿವಿಗಾಗಿಯೇ ಏರ್ಪಟ್ಟಂಥವು. ಫ್ರೌಢಶಾಲೆಯಲ್ಲಿ ಸಾಮಾನ್ಯ ವಿಜ್ಞಾನ, ಗೃಹವಿಜ್ಞಾನ ಮುಂತಾದ ವಿಷಯಗಳಲ್ಲಿ ಪ್ರಯೋಗಗಳನ್ನು ನಡೆಸುವುದುಂಟು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಸುಬುಕಲೆಗಳನ್ನು ಕಲಿಯಲು ಸೈದ್ಧಾಂತಿಕ ತರಗತಿಗಳ ಜೊತೆಗೆ ಕರ್ಮಶಾಲೆಗಳಲ್ಲಿ ಕಾರ್ಯಾನುಭವವನ್ನು ದೊರಕಿಸಲಾಗುವುದು. ಉನ್ನತ ಶಿಕ್ಷಣದಲ್ಲೂ ಇಂಥ ಪ್ರಯೋಗ ಕಾರ್ಯಕ್ರಮ ಸೈದ್ಧಾಂತಿಕ ಶಿಕ್ಷಣದಷ್ಟೇ ಪ್ರಾಧಾನ್ಯ ಪಡೆದುಕೊಳ್ಳುತ್ತಿದೆ. ಮೂಲಭೂತ ವಿಜ್ಞಾನ ಶಾಲೆಗಳು ಅಥವಾ ಮಾನವಿಕಶಾಸ್ತ್ರಗಳು ರೂಢಿಸಿರುವ ಸೈದ್ಧಾಂತಿಕ ಜ್ಞಾನವನ್ನು ಕಾರ್ಖಾನೆ ಶಾಖೆಗಳು ಕಾರ್ಯಾಲಯ, ಸಮಾಜ ಮುಂತಾದವು ಬಳಸಿಕೊಂಡ ಪ್ರಯುಕ್ತವಾಗಿಸಿಕೊಳ್ಳುವ ಮುನ್ನ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಆ ಕಾರ್ಯವಿಧಾನವನ್ನು ಪ್ರಾಯೋಗಿಕವಾಗಿ ಮಾಡಿನೋಡಿ ಪಕ್ವಪಡಿಸಿ ದೃಢಪಡಿಸಿಕೊಂಡು ಅನಂತರ ಅದನ್ನು ಬಳಕೆದಾರರಿಗೆ ಒದಗಿಸಲಾಗುವುದು.

	ಎಂಜಿನಿಯರಿಂಗ್, ವೈದ್ಯ, ನ್ಯಾಯ ಮುಂತಾದ ವೃತ್ತಿಶಿಕ್ಷಣದಲ್ಲಿ ಸೈದ್ಧಾಂತಕ ಹಾಗೂ ಪ್ರಾಯೋಗಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಮೇಲೆ ಅವರು ವಾಸ್ತವಿಕ ಸನ್ನಿವೇಶದಲ್ಲಿ ಕಾರ್ಯಾಚರಣೆಗೆ ನೇರವಾಗಿ ತೊಡಗುವ ಮುನ್ನ ಸಂಬಂಧಿಸಿದ ಉದ್ಯಮದಲ್ಲಿ ನುರಿತ ತಜ್ಞರ ಅಥವಾ ಅನುಭವಿಗಳ ನೇತೃತ್ವದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದೂ ಅವರ ಕಾರ್ಯ ಕೌಶಲ್ಯವನ್ನು ವೃದ್ದಿಪಡಿಸಿಕೊಳ್ಳುವುದಕ್ಕಾಗಿಯೇ ಏರ್ಪಟ್ಟಿರುವ (ಉಮೇದುವಾರ) ಕಾರ್ಯಕ್ರಮ.

	ಈಗಂತೂ ಪ್ರತಿಯೊಂದು ಉದ್ದಿಮೆಯವರೂ ತಮ್ಮಲ್ಲೊಂದು ಪ್ರಯೋಗ ಶಾಲೆಯನ್ನು ಇಟ್ಟುಕೊಂಡಿದ್ದು ತಜ್ಞರಿಂದ ಬಗೆಬಗೆಯ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಅದರ ಫಲವಾಗಿ ಹೊಸ ಹೆಚ್ಚು ಉಪಯುಕ್ತ ಪದಾರ್ಥಗಳ ಮಾರುಕಟ್ಟೆಗೆ ಬರುತ್ತಿದೆ. ಜ್ಞಾನ ವಿಶಾಲವೂ ಖಚಿತವೂ ಆಗುತ್ತಿದೆ.

	ಚಿತ್ರಕಾಲಾವಿದರು, ಲೇಖಕರು, ನಟರು ತಾವು ಪಡೆದಿರುವ ಅಥವಾ ಪಡೆಯುವ ಸೈದ್ಧಾಂತಿಕ ಜ್ಞಾನವನ್ನು ಅಧರಿಸಿ ಕೃತಿರಚನೆಯಲ್ಲಿ ಅಭ್ಯಾಸ ಪಡೆಯಲು ಈಚೆಗೆ ಕರ್ಮಶಾಲೆಗಳನ್ನು (ವರ್ಕ್‍ಷಾಪ್) ನಡೆಸಲಾಗುತ್ತಿದೆ.
(ಜಿ.ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ